Menu Close

ಕ್ರಾಣೂರ್ಗ್ಗಣದ ಮೇಘ(ಷ)ಪಾಷಾಣಗಚ್ಛದ ಬಸದಿ ಶಾಸನ

ಚಿತ್ರ(ದೃಶ್ಯ)ಶಾಸನ.

ಪಱುಗುಂ ನೆರ್ಕ್ಕನೆ ವೈರಿಯೆಂಬ ತೊಡರಂ ವಿದ್ವಿಷ್ಟರಂ ಸಱ್ಱೆನ
ಲ್ನೆಱ್ಱೆಸೀೞ್ದಿಕ್ಕಿಯೆ ದುಷ್ಟ ದಾಯಿಗರ ನಿಟ್ಟೆಲ್ವಂ ಬಿರಿಲ್ಲೆಂಬಿನಂ
ಮುಱುದೀಡಾಡಿ ನಭೋನ್ತದೊಳ್ ನಿಲಿಸಿ ಕೋಡೇಱಂ
ನಿಜೋತ್ಸಾಹದಿಂ
ಮೇಱೆಗುಂ ಕಾಳನ ಗನ್ಧವಾರಣ ಮೇಲೆ ಜೀಹಯ್ಯ ಬಾಪ್ಪೆಂಬಿನಂ||

“ತನ್ನ ದಾರಿಗೆ ತೊಡರಾದ ವೈರಿಯನ್ನು ಹುರಿದು ಮುಕ್ಕಿ, ಶತ್ರುಗಳ ಮೇಲೆ ಶರವೇಗದಲ್ಲಿ ಅಪ್ಪಳಿಸಿ,ನುಗ್ಗುಮಾಡಿ, ದುಷ್ಟ ದಾಯಾದಿಗಳ ಬೆನ್ಮೂಳೆಯನ್ನು ಪುಡಿಮಾಡಿ, ತನ್ನ ನಿಡಿದಾದ ಕೊರೆಗಳಲ್ಲಿ ಶತ್ರುಗಳನ್ನು ಸಿಕ್ಕಿಸಿ ನಭಕೆತ್ತರಿಸಿ ಆರ್ಭಟಿಸುತ್ತಿದ್ದ ಶ್ರೇಷ್ಠಜಾತಿಯ ಒಂಟಿಸಲಗನೇ. ಕಾಳನ ಮಗ ಆದಿತ್ಯವರ್ಮ”

ಒಂದೇ ಒಂದು ವೃತ್ತದಲ್ಲಿ ರಣಾಂಗಣದ ದೃಶ್ಯವನ್ನು ಸೆರೆ ಹಿಡಿದಿರುವುದು ಕವಿ ಕೌಶಲ್ಯ. ಗನ್ಧವಾರಣ ಎಂದರೆ ಶ್ರೇಷ್ಠ ಜಾತಿಯ ಆನೆ ಅಂತೆಯೆ ಆದಿತ್ಯವರ್ಮನೂ ಶ್ರೇಷ್ಠ ನರಗಜ. ಇಡೀ ಪದ್ಯ ಶ್ಲೇಷ ಅಲಂಕಾರದಿಂದ ಕೂಡಿದ್ದು ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ರಚನೆಯಾಗಿದೆ. ಮತ್ತೇಭ ಎಂದರೆ ಆನೆ .ಮತ್ತೇಭ ಮತ್ತು ಮತ್ತೇಭದ ಶಕ್ತೀ ಸಾಮರ್ಥವನ್ನು ಹೊಂದಿದ ಆದಿತ್ಯವರ್ಮನನ್ನು ಅದೇ ಭಾವದ ವೃತ್ತದಲ್ಲಿ ವರ್ಣಿಸಲಾಗಿದೆ. ನೆರ್ಕ್ಕು, ಸಱ್ಱನೆ, ಬಿರಿಲ್ ಎಂಬಿತ್ಯಾದಿ ಅನುರಣನಾವಾಚಿಗಳು ಬಣ್ಣನೆಗೆ ಒತ್ತಾಸೆಯಾಗಿ ತರಲಾಗಿದೆ. ಒಬ್ಬ ವ್ಯಕ್ತಿಗಿರುವ ರಣರಂಗದ ಶಕ್ತಿ ಸಾಮರ್ಥ್ಯವನ್ನು ಕವಿ ತನ್ನ ಅಕ್ಷರಗಳಲ್ಲಿ ಸೆರೆಹಿಡಿದ ಪರಿ ಮೆಚ್ಚುಗೆಗೆ ಪಾತ್ರವಾದದ್ದು.

ಈ ಕವಿಯ ಕಲ್ಪನೆಯನ್ನು ಯಥಾವತ್ತಾಗಿ ಅನುಭವಿಸಿ ಮೂರ್ತಗೊಳಿಸಿದ್ದು ಶಿಲ್ಪಿ. ಅವನು ಚಿತ್ರಿಸಿದ ಮತ್ತೇಭದ ರಂಗೇರಿದ ದೃಶ್ಯ ಕಲಾಸೌಂದರ್ಯದ ಅಂಗೈ.ಕವಿ ಹೇಳಿದಂತೆ ಮದಗಜವು ವೈರಿಗಳ ಬೆನ್ನೆಲುಬನ್ನು ಮುರಿಯುವ,ಸೊಂಡಿಲ್ಲಲ್ಲಿ ಮೇಲೆತ್ತಿ ನೆಲಕ್ಕೆ ಕುಕ್ಕುವ, ಕಾಲಲ್ಲಿ ತುಳಿದು ಹಿಸುಕುವ ಚಿತ್ರಣ ಭಯಂಕರವಾಗಿದೆ. ಇದೆಲ್ಲವೂ ಆದಿತ್ಯ ವರ್ಮನ ಗುಣವಾಗಿತ್ತು ಎಂದು ಕವಿ ಮತ್ತು ಶಿಲ್ಪಿ ಶ್ರುತಪಡಿಸಿದ್ದಾರೆ. ಲಿಪಿಕಾರನೇನೂ ಹಿಂದೆಬಿದ್ದಿಲ್ಲ. ಆದಿತ್ಯವರ್ಮನ ಗುಣಾವಳಿಯಂತೆ ಚಿತ್ರಿಸಲಾದ ಶಿಲ್ಪದ ಕೆಳಗೆ ಚಿತ್ರಕ್ಕೆ ಶಾಸನ ಎಂಬಂತೆ ಸೊಗಸಾದ ಲಿಪಿಯನ್ನು ಕೊರೆದು ಶಾಸನವನ್ನು ಅಂದಗೊಳಿಸಿದ್ದಾನೆ.

ಈ ಶಾಸನ ಇರುವುದುಕಾಗಿನೆಲೆಯಲ್ಲಿ. ಇಲ್ಲಿನ ಆದಿಕೇಶವ ದೇಗುಲದ ಬಳಿ ಭಂಡಾರಕೇರಿ ಸ್ವಾಮಿಯ ಸಮಾಧಿ ಇದೆ. ಇದಕ್ಕೆ ನಾಲ್ಕು ಬದಿಯಲ್ಲಿ ೧೨ ನೆಯ ಶತಮಾನದಲ್ಲಿ ಇದೇ ಊರಲ್ಲಿ ಇದ್ದ ಬಸದಿಯೊಂದರ ಕಂಭಗಳನ್ನು ಬಳಸಲಾಗಿದೆ. ಇದು;ಯಾಪನೀಯ;ಸಂಘಕ್ಕೆ ಸೇರಿದಕ್ರಾಣೂರ್ಗ್ಗಣದಮೇಘ(ಷ)ಪಾಷಾಣಗಚ್ಛದ ಬಸದಿ. ಪ್ರತೀ ಕಂಭವೂ ಸೊಗಸಾದ ಚಿತ್ತಾರದಿಂದ ಕೂಡಿದ್ದು, ನಾಲ್ಕೂ ಬದಿಯಲ್ಲಿ ಶಿಲ್ಪ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಸದ್ಯ ನಾಲ್ಕು ಕಂಭದ ಎರಡೆರಡರಂತೆ ಒಟ್ಟು ಎಂಟು ಮುಖಗಳು ಕಾಣುತ್ತಿವೆ. ಉಳಿದವು ಗೊಡೆಯಲ್ಲಿ ಹುಗಿದಿವೆ. ಪ್ರಾಚ್ಯವಸ್ತು ಇಲಾಖೆ ಅಥವಾ ಸ್ಥಳಿಯರು, ದೇಗುಲದ ಹಿರಿಯರು ಮನಸ್ಸು ಮಾಡಿ ಈ ಕಂಭಗಳನ್ನು ಹೊರ ತೆಗೆದು ಸಂರಕ್ಷಿಸಿದರೆ ಮತ್ತಷ್ಟು ಚಿತ್ತಾರಗಳು,ಪೂರ್ಣ ಶಾಸನ ದೊರೆಯುವಂತಾಗುತ್ತದೆ. ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದಿತ್ಯವರ್ಮಚಾಳುಕ್ಯರ ರಾಜ್ಯಾಡಳಿತದಲ್ಲಿದ್ದ ಕಾಗಿನೆಲ್ಲಿಯ ಪ್ರಭುಗಾವುಂಡ. ಈ ಗೌಡ ತನ್ನೂರಲ್ಲಿ ಮೇಘ(ಷ)ಪಾಷಾಣಗಚ್ಛದ ಬಸದಿಯೊಂದನ್ನು ಮಾಡಿಸಿದ. ಇವನ ಸ್ಮರಣಿಕೆಗಾಗಿ ಇವನ ಬಳ್ವಲೆಂಕ;ಮಸಣ ಎಂಬುವವನು ಈ ಶಾಸನಗಂಭಗಳನ್ನು ಅದೇ ಬಸದಿಯಲ್ಲಿ ಮಾಡಿಸುತ್ತಾನೆ.ಪ್ರತಿ ಕಂಭದಲ್ಲೂ ಆದಿತ್ಯವರ್ಮನ ಗುಣಾವಳಿ ಹೇಳುವ ಶಾಸನ ಅದರ ಮೇಲೆ ಅದೇ ಭಾವವನ್ನು ಸೂಸುವ ಶಿಲ್ಪ ಕೆತ್ತಲಾಗಿದೆ. ಉದಾ : ವೈರಿ ನಾರಾಯಣ ಆದಿತ್ಯವರ್ಮ ಎಂದಾಗ ನಾರಾಯಣ ಶತ್ರು ಸಂಹಾರ ಮಾಡುವ ದೃಶ್ಯ ತರಲಾಗಿದೆ. ಹೆಚ್ಚಿನ ಪೋಟೋಗಳು ಕಾಮೆಂಟ್ನಲ್ಲಿ ಗಮನಿಸಿ.

ಆಧಾರ.
ಸೌತ್ ಇಂಡಿಯನ್ ಇನ್ಸಕ್ರಿಪ್ಶನ್ಸ್
ಸಂಪುಟ ೧೮. ನಂಬರ್ -೩೪೫ ಪುಟ ೪೩೭-೪೩೮.